Media Coverage‎ > ‎

Namma Bengaluru Awards 2012 (Kannada Prabha)

ಕನ್ನಡಪ್ರಭ >> ಜಿಲ್ಲೆ >> ಬೆಂಗಳೂರು ನಗರ

ಬೆಸ್ಕಾಂ ಎಂಡಿ ಪಿ.ಮಣಿವಣ್ಣನ್ ವರ್ಷದ ಬೆಂಗಳೂರಿಗ

First Published: 17 Mar 2013 02:00:00 AM IST

ಬೆಂಗಳೂರು: 'ನಮ್ಮ ಬೆಂಗಳೂರು ಪ್ರತಿಷ್ಠಾನ' ನೀಡುವ ಪ್ರತಿಷ್ಠಿತ 'ನಮ್ಮ ಬೆಂಗಳೂರು' ಪ್ರಶಸ್ತಿಯ 4ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ 
ಸಂಜೆ ಮಲ್ಲೇಶ್ವರ ಆಟದ ಮೈದಾನದಲ್ಲಿ ವರ್ಣರಂಜಿತವಾಗಿ ನಡೆಯಿತು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ಮಣಿವಣ್ಣನ್ ಅವರಿಗೆ 2012ರ 'ವರ್ಷದ ಬೆಂಗಳೂರಿಗ' ಪ್ರಶಸ್ತಿ ಸೇರಿದಂತೆ 9 ವಿಭಾಗಗಳಲ್ಲಿ ವಿಶಿಷ್ಟ  ಸೇವೆ ಸಲ್ಲಿಸಿದ 11 ಮಂದಿ ಸಾಧಕ ವ್ಯಕ್ತಿ ಹಾಗೂ ಸಂಘ-ಸಂಸ್ಥೆಗಳಿಗೆ 'ನಮ್ಮ ಬೆಂಗಳೂರು-2012' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶತಾಯುಷಿ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಗಾಗಿ ಈ ವರ್ಷ ದಾಖಲೆ ಮಟ್ಟದ ಅಂದರೆ 61 ಸಾವಿರ ನಾಮನಿರ್ದೇಶನ ಬಂದಿದ್ದು, ಅವರಲ್ಲಿ 53 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳ ಇಪ್ಪತ್ತು ಮಂದಿ ಗಣ್ಯರು ಅಂತಿಮ ಸುತ್ತಿನಲ್ಲಿದ್ದವರನ್ನು ಸಮರ್ಥವಾಗಿ ಆಯ್ಕೆ ಮಾಡುವ ಮೂಲಕ ನೈಜ ಅರ್ಹತೆಯುಳ್ಳವರಲ್ಲೇ ಅತಿಯೋಗ್ಯ 11 ಮಂದಿ ವ್ಯಕ್ತಿ, ಸಂಘ-ಸಂಸ್ಥೆಗಳನ್ನೇ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು, ಇದೊಂದು ಯೋಗ್ಯರಲ್ಲೇ ಅತಿಯೋಗ್ಯರನ್ನು ಹುಡುಕಿ ಗೌರವಿಸುವ ಅತಿ ಅಪರೂಪದ ಕಾರ್ಯಕ್ರಮ. ನಗರದ ಉನ್ನತಿಗೆ ನಿಸ್ವಾರ್ಥ ಸೇವೆ ಮೂಲಕ ವಿಶೇಷವಾಗಿ ಶ್ರಮಿಸಿ ತೆರೆಮರೆಯಲ್ಲೇ ಇದ್ದವರನ್ನು ಹೀಗೆ ಗೌರವಿಸುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಮಾಣಿಕ ಸಜ್ಜನರಲ್ಲಿ ಪ್ರಾಮಾಣಿಕತೆ ಹೆಚ್ಚುತ್ತದೆ. 61 ಸಾವಿರ ದಾಖಲೆ ಸಂಖ್ಯೆಯ ನಾಮನಿರ್ದೇಶನಗಳನ್ನು 53ಕ್ಕೆ 
ಇಳಿಸಿ ಅವರಲ್ಲಿ 11 ಜನರನ್ನು ಆಯ್ಕೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಹೀಗೆ ಪ್ರಶಸ್ತಿ ಆಯ್ಕೆಯಲ್ಲಿ ಯಾವ ರೀತಿಯ ಪ್ರಭಾವವನ್ನೂ ಪರಿಗಣಿಸದೇ 
ವಿಜೇತರನ್ನು ಆಯ್ಕೆ ಮಾಡುತ್ತಿರುವುದರ ಮೂಲಕ ನಮ್ಮ ಬೆಂಗಳೂರು ಪ್ರತಿಷ್ಠಾನದ್ದು ಶ್ರೇಷ್ಠ ಕೆಲಸ. ಇವೆಲ್ಲದಕ್ಕೂ ತೆರೆಮರೆಯಲ್ಲೇ ನಿಂತು ಪ್ರೋತ್ಸಾಹಿಸುತ್ತಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ಭರಪೂರ ಮನರಂಜನೆ: ಪ್ರಶಸ್ತಿ ಪ್ರದಾನಕ್ಕೂ ಮುನ್ನ ಹಾಗೂ ಬಳಿಕ ವಿವಿಧ ಸಂಗೀತ-ನೃತ್ಯ ಪ್ರಾಕಾರಗಳ ವಿಶೇಷ ಮನರಂಜನೆ ಕಾರ್ಯಕ್ರಮ 
ಏರ್ಪಡಿಸಲಾಗಿತ್ತು. ಸಂಗೀತ ನಿರ್ದೇಶಕ ರಘು ದೀಕ್ಷಿತ್, ಕಲಾವಿದ ವಿಲಾಸ್ ನಾಯಕ್ ಸೇರಿದಂತೆ ಅಂತರ್ಧ್ವನಿ ಮತ್ತು ಆರ್ಟಿಕ್ಯುಲೇಟ್ ಎಬಿಲಿಟಿ ತಂಡಗಳ ಕಲಾಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ವಾರಾಣಸಿ, ತೀರ್ಪುಗಾರರ ಸಮಿತಿ ಅಧ್ಯಕ್ಷ ಪ್ರದೀಪ್ ಕರ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ಪ್ರಶಸ್ತಿ ಪುರಸ್ಕೃತ ವ್ಯಕ್ತಿ, ಸಂಘ-ಸಂಸ್ಥೆಗಳು
1    ಬ್ರಿಟಾನಿಯಾ ಸಂಸ್ಥೆ: ವಿಭಾಗ-ಔದ್ಯಮಿಕ ಸಾಮಾಜಿಕ ಹೊಣೆಗಾರಿಕೆ    
ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆಗೆಗಾಗಿ ಮುಖ್ಯಸ್ಥ ನಂದನ್ ಭಾಟಿಯಾ ಪ್ರಶಸ್ತಿ ಸ್ವೀಕರಿಸಿದರು.
2    ಫಾದರ್ ಜಾರ್ಜ್ ಕಣ್ಣನ್‌ಥಮ್ -ಸುಮನಹಳ್ಳಿ ಸೊಸೈಟಿ ಸಂಸ್ಥಾಪಕ: ವಿಭಾಗ - ನಾಗರಿಕ    
ಕುಷ್ಠ, ಏಯ್ಡ್ಸ್ ಮುಂತಾದ ರೋಗಗಳಿಂದ ಶೋಷಿತರಾದವರ ಪರ ದನಿಯಾಗಿದ್ದಕ್ಕೆ.
3    ಕುಲದೀಪ್ ದಾಂತೆವಾಡಿಯಾ: ರೀಪ್ ಬೆನಿಫಿಟ್ ಸಂಸ್ಥಾಪಕ: ವಿಭಾಗ - ನಾಗರಿಕ (ಯುವ ಜನಾಂಗ)    
ರೀಪ್ ಬೆನಿಫಿಟ್ ಮೂಲಕ ವಿಕೇಂದ್ರಿತ ಘನ ತ್ಯಾಜ್ಯ ನಿರ್ವಹಣೆಗೆ ತೋರಿದ ಶ್ರಮಕ್ಕಾಗಿ.
4    ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್: ವಿಭಾಗ - ನಾಗರಿಕ ಸಂಘಟನೆ    
ಪುಟ್ಟೇನಹಳ್ಳಿ ಕೆರೆ ಪುನರುಜ್ಜೀವನಕ್ಕೆ ಶ್ರಮಿಸಿ ಕೆರೆಗೆ ಮರುಜೀವ ನೀಡಿ ಪ್ರಕೃತಿ ಹಾಗೂ ಜಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಸಂಸ್ಥಾಪಕಿ ಉಷಾ ರಾಜಗೋಪಾಲನ್ ಪ್ರಶಸ್ತಿ ಸ್ವೀಕರಿಸಿದರು.
5    ವೈ.ಎಸ್.ಪವಿತ್ರ, ವ್ಯವಸ್ಥಾಪಕ ನಿರ್ದೇಶಕಿ, ವಿಂದ್ಯಾ ಇ-ಇನ್ಫೋ ಮೀಡಿಯಾ: ವಿಭಾಗ - ಸಾಮಾಜಿಕ ಉದ್ಯಮಿ    
ಬಿಪಿಓ ಸಂಸ್ಥೆ ಸ್ಥಾಪಿಸಿ ವಿಕಲಚೇತನರಿಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕೆ. ಇವರ ಸಂಸ್ಥೆಯಲ್ಲಿ ನೌಕರಿ ನಿರ್ವಹಿಸುತ್ತಿರುವವರಲ್ಲಿ ಬಹುಪಾಲು ವಿಕಲಚೇತನರೇ.
6    ಸೀತಾಲಕ್ಷ್ಮಿ, ಮೆಟ್ರೋ ಸಂಪಾದಕಿ, ಟೈಮ್ಸ್ ಆಫ್ ಇಂಡಿಯಾ: ವಿಭಾಗ - ಮಾಧ್ಯಮ    
ಅಪರಾಧ ಸುದ್ದಿಗಳಿಂದ ಹಿಡಿದು ಶಿಕ್ಷಣ, ಆರೋಗ್ಯ, ನಾಗರಿಕ ಮೂಲಸೌಕರ್ಯದವರೆಗೆ ಎಲ್ಲ ರೀತಿಯ ವಿಭಾಗ ನಿರ್ವಹಿಸುವ ಜತೆಗೆ ತ್ಯಾಜ್ಯ ನಿರ್ವಹಣೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣರಾಗಿದ್ದಕ್ಕೆ.
7    ಬಿ.ಜಿ.ಚೆಂಗಪ್ಪ, ನಿರ್ದೇಶಕ, ಕರ್ನಾಟಕ ರಾಜ್ಯ ಅಗ್ನಿ ಮತ್ತು ತುರ್ತುಸೇವೆಗಳ ಇಲಾಖೆ: ವಿಭಾಗ-ಸರ್ಕಾರಿ ಉದ್ಯೋಗ    
ಇಲಾಖೆಯಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವುದಲ್ಲದೇ ಇಲಾಖೆಯ ನಿಯಮಗಳ ತಿದ್ದುಪಡಿ ಹಾಗೂ ಅಗ್ನಿಶಾಮಕ ಸೇವೆಯ ಆಧುನೀಕರಣಕ್ಕೆ ಶ್ರಮಿಸಿದ್ದಕ್ಕೆ.
8    ಮಹಾದೇವ ರಾಜಪ್ಪ ಸಂಬರ್ಗಿ, ಮುಖ್ಯ ಪೇದೆ, ಬೆಂಗಳೂರು ಸಂಚಾರ ಪೊಲೀಸ್: ವಿಭಾಗ - ಸರ್ಕಾರಿ ಉದ್ಯೋಗಿ    
ಜನನಿಬಿಡ ಹೊರವರ್ತುಲ ರಸ್ತೆಯ ಪ್ರದೇಶಗಳಲ್ಲಿ ದಿನದ ಬಹುಪಾಲು ಸಮಯ ಏಕಾಂಗಿಯಾಗಿ ಸಂಚಾರವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕೆ.
9    ಬೆಂಗಳೂರು ಸಂಚಾರ ಪೊಲೀಸ್: ವಿಭಾಗ-ಸರ್ಕಾರಿ ಸಂಸ್ಥೆ    
ದೇಶದಲ್ಲೇ ಮೊದಲ ಬಾರಿಗೆ ವಾಹನ ಕಾಯ್ದೆ ಮತ್ತು ನಿಯಮಗಳನ್ನು ಕಾಗದರಹಿತವಾಗಿ ಜಾರಿಗೆ ತರುವ ಜತೆಗೆ ಸೌರಶಕ್ತಿ ಆಧರಿತ ಸಿಗ್ನಲ್‌ಗಳನ್ನು ರಚಿಸಿದ್ದಕ್ಕೆ. ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಪ್ರಶಸ್ತಿ ಸ್ವೀಕರಿಸಿದರು.
10    ಬಿ.ಎನ್.ವಿಜಯಕುಮಾರ್: ವಿಭಾಗ- ಜನಪ್ರತಿನಿಧಿ    
ಜಯನಗರದಲ್ಲಿ ಮಳೆನೀರು ಕೊಯ್ಲು ಕೇಂದ್ರ ಸ್ಥಾಪಿಸುವ ಜತೆಗೆ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್, ಎಲೆಕ್ಟ್ರಾನಿಕ್ಸ್ ರೆಫರಲ್ ಗ್ರಂಥಾಲಯ ಸ್ಥಾಪನೆ, ಪ್ರತ್ಯೇಕ ಸೈಕಲ್ ಪಥ ಇತ್ಯಾದಿ ಚಟುವಟಿಕೆಗಳ ಕಾರಣಕ್ಕೆ.
11    ಪಿ.ಮಣಿವಣ್ಣನ್, ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ: 'ವರ್ಷದ ಬೆಂಗಳೂರಿಗ ಪ್ರಶಸ್ತಿ'    
ನಗರಕ್ಕೆ ನಿರಂತರ ವಿದ್ಯುತ್ ಪೂರೈಸಲು ವಿನೂತನ ಕ್ರಮಕೈಗೊಂಡಿರುವ ಜತೆಗೆ ವಿದ್ಯುತ್ ಪೂರೈಕೆ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದ್ದಕ್ಕೆ.

ಇದು ಜನರ ನಡುವಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ. ಸಾಧಕರಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಲುವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಮೂಲಕ ಸಾಧಕರನ್ನು ಪ್ರೋತ್ಸಾಹಿಸಿ ಮತ್ತಷ್ಟು ಸಾಧಕರು ಹಾಗೂ ಸಾಧನೆಗೆ ಪ್ರೋತ್ಸಾಹ ನೀಡುವುದೇ ಪ್ರತಿಷ್ಠಾನದ ಉದ್ದೇಶ.

ಟಿ ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಸದಸ್ಯ, ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯಸ್ಥ
---------------
Read the article online here