Apt STP water to lake trial

ಪುಟ್ಟೇನಹಳ್ಳಿ ಕೆರೆಗೆ ಅಪಾರ್ಟ್‌‌ಮೆಂಟ್‌ಗಳ ಸಂಸ್ಕರಿತ ನೀರು ಬಿಡಲು ಪ್ರಾಯೋಗಿಕ ಯೋಜನೆ

March 31, 2015 by kspcbgok

ಕೆರೆಗೂ ಕಾಯಕಲ್ಪ; ಅಪಾರ್ಟ್‌‌ಮೆಂಟ್‌ ತ್ಯಾಜ್ಯನೀರಿಗೂ ಪರಿಹಾರ ನಿರೀಕ್ಷೆ

ಬೆಂಗಳೂರಿನ ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ಎಲ್‌ ಎಂಡ್‌ ಟಿ ಸೌತ್‌ ಸಿಟಿ ಗೃಹಸ್ತೋಮ `ಸುಗೃಹ’ ದ ಹೆಚ್ಚುವರಿ ತ್ಯಾಜ್ಯ ನೀರನ್ನು ಮಾನದಂಡಗಳಿಗೆ ತಕ್ಕಂತೆ ಸಂಸ್ಕರಿಸಿ ಬಿಡುವುದಕ್ಕೆ ಪ್ರಾಯೋಗಿಕವಾಗಿ ಸಮ್ಮತಿ ನೀಡುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್‌ ಆಚಾರ್ಯ ತಿಳಿಸಿದ್ದಾರೆ. ಮಾರ್ಚ್‌ ೨೮ರಂದು ಪುಟ್ಟೇನಹಳ್ಳಿ ಕೆರೆಯಲ್ಲಿ ನಡೆದ ಸ್ವಯಂಸೇವಕರ ಕೆರೆ ಶುದ್ಧೀಕರಣ ದಿನದ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ಉಪ ಲೋಕಾಯುಕ್ತ ಶ್ರೀ ಸುಭಾಷ್‌ ಬಿ ಅಡಿ ಮತ್ತು ಮುಖ್ಯ ಇಂಜಿನಿಯರ್‌ ಶ್ರೀ ಸತೀಶ್‌, ಮಂಡಳಿಯ ಪ್ರಾದೇಶಿಕ ಅಧಿಕಾರಿ ಶ್ರೀ ಸಿದ್ದರಾಮಯ್ಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಅವರೂ ಭಾಗಿಯಾಗಿ ಕೆರೆ ದಡದಲ್ಲಿ ಸಸಿಗಳನ್ನು ನೆಟ್ಟ ನಂತರ ಈ ನಿರ್ಧಾರ ಪ್ರಕಟಿಸಿದರು.

೧೩ ಎಕರೆಗಳ ಪ್ರದೇಶದಲ್ಲಿರುವ ಪುಟ್ಟೇನಹಳ್ಳಿ ಕೆರೆಯು ಬಿಬಿಎಂಪಿಯ ಉಸ್ತುವಾರಿಗೆ ಸೇರಿದ್ದು ಅದರ ಎರಡು ಎಕರೆ ಪ್ರದೇಶವು ಅತಿಕ್ರಮಣಕ್ಕೆ ಒಳಗಾಗಿದೆ. ಈ ಅತಿಕ್ರಮಣವಾಸಿಗಳಿಗೆ ಬಿಂಗಿಪುರದಲ್ಲಿ ಬದಲಿಯಾಗಿ ಮನೆಗಳನ್ನು ಕಟ್ಟಿಕೊಡಲಾಗಿದ್ದು ಸ್ಥಳಾಂತರ ಪ್ರಕ್ರಿಯೆ ನಡೆದಿದೆ. ಈ ಕೆರೆಯನ್ನು ಅಭಿವೃದ್ಧಿಪಡಿಸಲು ಸುತ್ತಮುತ್ತಲ ಅಪಾರ್ಟ್‌‌ಮೆಂಟ್‌ ನಿವಾಸಿಗಳು ಪುಟ್ಟೇನಹಳ್ಳಿ ನೆರೆಹೊರೆ ಕೆರೆ ಸುಧಾರಣಾ ಟ್ರಸ್ಟ್‌ ರಚಿಸಿಕೊಂಡಿದ್ದಾರೆ. ಕೇವಲ ಮಳೆನೀರಿನಿಂದಲೇ ತುಂಬಲಾಗದ ಈ ಕೆರೆಯಲ್ಲಿ ಸಂಸ್ಕರಿತ ಕೊಳೆನೀರನ್ನು ಬಿಟ್ಟು ತುಂಬಿಸಿದರೆ ಕ್ರಮೇಣವಾಗಿ ಅಂತರ್ಜಲವೂ ಹೆಚ್ಚುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ ನೋಡಲೆಂದೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆರೆಯ ಉಸ್ತುವಾರಿ ಹೊಂದಿರುವ ಬಿಬಿಎಂಪಿಯು ಈ ವ್ಯವಸ್ಥೆಗೆ ತನ್ನ ಅನುಮತಿಯನ್ನು ನೀಡಿತ್ತು.

`ಅಂತೂ ನಮ್ಮ ಕೆರೆ ತುಂಬಲಿದೆ ಎಂಬುದು ಸಂತೋಷದ ಸಂಗತಿ. ಕೆರೆಯಲ್ಲಿ ನೀರೇ ಇರದಿದ್ದರೆ ಅವುಗಳನ್ನು ರಕ್ಷಿಸಿದ್ದಕ್ಕೆ ಅರ್ಥವೇ ಇರುವುದಿಲ್ಲ. ಇನ್ನುಮುಂದೆ ಇಲ್ಲಿ ಪಕ್ಷಿಗಳು ಬರಬರುವವು ಎಂದು ಆಶಿಸಬಹುದು” ಎಂದು ಟ್ರಸ್ಟ್‌ನ ಅಧ್ಯಕ್ಷೆ ಶ್ರೀಮತಿ ಉಷಾ ನಾರಾಯಣನ್‌ ಸಂತಸ ವ್ಯಕ್ತಪಡಿಸುತ್ತಾರೆ.

ಆದರೆ ಕೆರೆಗೆ ಸಂಸ್ಕರಿತ ನೀರನ್ನು ಬಿಡುವ ಮುನ್ನ ಆನ್‌ಲೈನ್‌ ಮಾಲಿನ್ಯ ನಿಗಾ ವ್ಯವಸ್ಥೆಯೊಂದನ್ನು ರೂಪಿಸಿ ಅಳವಡಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯನ್ನು ಸ್ವತಃ ಟ್ರಸ್ಟ್‌ ನೋಡಿಕೊಳ್ಳಲು ಮುಂದೆ ಬಂದಿದೆ.

ಚರಂಡಿ ನೀರನ್ನು ಸಂಸ್ಕರಿಸಿ, ಸೂಕ್ತ ಮಾನದಂಡಗಳಿಗೆ ಒಳಪಡಿಸಿ ಕೆರೆಗೆ ಬಿಟ್ಟರೆ ಅದರಿಂದ ಕೆರೆಯ ನೀರಿನ ಮಟ್ಟ ಹೆಚ್ಚುತ್ತದೆ ; ಅಂತರ್ಜಲದ ಮಟ್ಟವೂ ಏರುತ್ತದೆ ಎಂಬ ಅಂಶವನ್ನು ಇಲ್ಲಿ ಗಮನಿಸಬಹುದಾಗಿದೆ.. ಈ ಪ್ರಯೋಗಾತ್ಮಕ ವಿಧಾನವು ಯಶಸ್ವಿಯಾದರೆ ನಗರದ ಒಳಗಿರುವ ಇನ್ನಿತರೆ ಕೆರೆಗಳನ್ನು ಕೂಡಾ ಪುನರುಜ್ಜೀವಿಸಬಹುದಾಗಿದೆ.

--------------------------------------------

Read the post online here.